ಸ್ಮಾರ್ಟ್ಸಿಟಿ ಕಂಪನಿಗೆ 3 ಕೋಟಿ ಬಡ್ಡಿ ನಷ್ಟವೆಸಗಿರುವ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಜರುಗಿಸಬೇಕು. ತುಮಕೂರು ಸ್ಮಾರ್ಟ್ಸಿಟಿ ಕಾಮಗಾರಿಗಳು ಮತ್ತು ಆಡಳಿತದ ವೈಖರಿ ಊಹೆಗೂ ಸಿಲುಕದ ಗೊಂದಲದ ಗೂಡಾಗಿದೆ. ನೈಜ ಕಾಮಗಾರಿಗಳು ನಡೆಯುತ್ತಿಲ್ಲ, ಪದೇ ಪದೇ ಅವ್ಯವಹಾರದ ಆರೋಪಗಳು ಕೇಳಿಬರುತ್ತಿದೆ. ಆದರೂ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇದರ ಬಗ್ಗೆ ಗೊತ್ತಿದ್ದೂ ಗೊತ್ತಿರದಂತೆ ಗೌಣವಾಗಿರುವುದು ಹಲವಾರು ಸಂಶಯಗಳಿಗೆ ಕಾರಣವಾಗಿದೆ ಎಂದು ಡಾ.ರಫೀಕ್ ಅಹ್ಮದ್ ತಿಳಿಸಿದ್ದಾರೆ.
2018ನೇ ಸಾಲಿನಲ್ಲಿ ತುಮಕೂರು ಸ್ಮಾರ್ಟ್ಸಿಟಿ ಲಿಮಿಟೆಡ್ಗೆ ಬಿಡುಗಡೆಯಾದ 260 ಕೋಟಿ ರೂ. ಅನುದಾನವನ್ನು ಧೀರ್ಘಕಾಲಿನ ಫ್ಲೆಕ್ಸಿ ಠೇವಣಿಯಲ್ಲಿಡದೆ ತಮ್ಮ ಸ್ವಂತ ಆರ್ಥಿಕ ಲಾಭಕ್ಕಾಗಿ ಉಳಿತಾಯ ಖಾತೆಯಲ್ಲೇ ಉಳಿಸಿಕೊಂಡ ಪರಿಣಾಮ ಕಂಪನಿಗೆ ಕೋಟ್ಯಾಂತರ ರೂಪಾಯಿಗಳ ಬಡ್ಡಿನಷ್ಟವಾಗಿದೆ ಎಂದು ವರದಿಯಾಗಿದೆ. ಇಷ್ಟಾದರೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಕ್ರಮ ತಗೆದುಕೊಳ್ಳದಿರುವುದು ಇವರ ಭಂಡತನದ ಪರಮಾವಧಿಯಾಗಿದೆ ಎಂದು ವಿಷಾಧಿಸಿದ್ದಾರೆ.
ಡಾ.ರಫೀಕ್ ಅಹ್ಮದ್ ರವರು ಕಳೆದ ವಾರ ಪತ್ರಿಕಾಗೋಷ್ಠಿ ನಡೆಸಿ ಸ್ಮಾರ್ಟ್ಸಿಟಿ ವತಿಯಿಂದ ನಡೆಸುತ್ತಿರುವ ಎಲ್ಲಾ ಕಾಮಗಾರಿಗಳ ಮತ್ತು ಆಡಳಿತದ ಸವಿವರವನ್ನು ಸ್ಮಾರ್ಟ್ಸಿಟಿ ವೆಬ್ಸೈಟ್ ನಲ್ಲಿ ನಮೂದಿಸಬೇಕೆಂದು ಒತ್ತಾಯಿಸಿದ್ದರು. ಯಾವುದೇ ರೀತಿಯ ವಿವರಗಳನ್ನು ನಮೂದಿಸದೆ ಬೇಕಾಬಿಟ್ಟಿ ಪ್ರಕಟಣೆ ನಡೆಯುತ್ತಿದ್ದು ಯಾವುದೇ ಮಾಹಿತಿಗಳು ಲಭ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದರು. ಇನ್ನಾದರೂ ಸ್ಮಾರ್ಟ್ಸಿಟಿ ವೆಬ್ಸೈಟ್ ಪಾರದರ್ಶಕವಾದ ಮಾಹಿತಿ ನೀಡಬೇಕು ಆಗ ಮಾತ್ರ ಇಂತಹ ಭ್ರಷ್ಟಾಚಾರ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂಬ ಸಲಹೆ ನೀಡಿದ್ದಾರೆ.
ಕೊರೊನಾ ದಿಂದಾಗಿರುವ ದುಷ್ಪರಿಣಾಮದಿಂದ ಸರ್ಕಾರ ಅನುದಾನ ನೀಡುವುದೇ ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಂದಿರುವ ಅನುದಾನಗಳಲ್ಲಿಯೇ ಕೋಟಿ ಕೋಟಿ ವಂಚನೆ ಮಾಡುತ್ತಿರುವ ಭ್ರಷ್ಟ ಅಧಿಕಾರಿಗಳ ಮೇಲೆ ಉನ್ನತ ಮಟ್ಟದ ತನಿಖೆ ನಡೆಸಿ ಕೂಡಲೇ ಕ್ರಮ ಜರುಗಿಸಬೇಕೆಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ. ಇಲ್ಲವಾದಲ್ಲಿ ಸ್ಮಾರ್ಟ್ಸಿಟಿ ಕಚೇರಿ ಮುಂದೆ ಧರಣಿ ಕೂರುತ್ತೇವೆ ಎಂದು ಡಾ.ರಫೀಕ್ ಅಹ್ಮದ್ ಎಚ್ಚರಿಸಿದ್ದಾರೆ.