ತುಮಕೂರು: ನಗರದ ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿಗೆ ಮೂವರು ಶೈಕ್ಷಣಿಕ ತಜ್ಞರ ನ್ಯಾಕ್ ಸಮಿತಿಯ ತಂಡ (ರಾಷ್ಟ್ರೀಯ ಪರಿಶೀಲನಾ ಹಾಗೂ ಮಾನ್ಯತಾ ಕೌನ್ಸಿಲ್) ಭೇಟಿ ನೀಡಿ ಪರಿಶೀಲನೆ ನಡೆಸಿತು. ಆ.27 ರಿಂದ 28ರವರೆಗೆ ಈ ತಂಡ ಕಾಲೇಜಿನಲ್ಲಿ ಗುಣಮಟ್ಟ, ಕಲಿಕೆ ಬಗ್ಗೆ ಪರಿಶೀಲನೆ ನಡೆಸಿದೆ. ಚೇರ್ ಪರ್ಸನ್ ಆಗಿ ಡಾ.ಗುರುದೀಪ್ ಸಿಂಗ್ ಕುಲಪತಿಗಳು ಯೂನಿವರ್ಸಿಟಿ ಆಫ್ ಮೈನ್ಸ್, ಮೆಂಬರ್ ಆಪ್ ಕೋಹಾರ್ಡಿನೇಟರ್ ಆಗಿ ಡಾ.ಸಂಜಯ್ ಡಿ ದೊಳೆ ಪುಣೆ ವಿಶ್ವವಿದ್ಯಾನಿಲಯ ಮತ್ತು ಸದಸ್ಯರಾಗಿ ಡಾ.ರಾಜೇಂದ್ರ ಕುಮಾರ್ ಗುಪ್ತ ಜಾಖಂಡ್ ವಿಶ್ವವಿದ್ಯಾನಿಲಯ ಅವರು ತಂಡದಲ್ಲಿದ್ದರು.
ಸಮಿತಿ ಆ.27 ರಂದು ಬೆಳಗ್ಗೆ ಕಾಲೇಜಿನಲ್ಲಿ ಪ್ರಾಚಾರ್ಯರಾದ ಡಾ. ಕೆ. ಎಸ್. ಕುಮಾರ್ ಅವರಿಂದ ಸಮಗ್ರ ವರದಿ ಬಗ್ಗೆ ಚರ್ಚಿಸಿತು. ಇದರಲ್ಲಿ ಐಕ್ಯೂಎಸಿ ಸದಸ್ಯರಾದ ಡಾ.ಸಿ ವಿಜಯಬಾಸ್ಕರ್, ಪ್ರೊ.ಸಿ.ನಂದೀಶ್ ಮತ್ತು ಪ್ರೊ.ಟಿ.ಜಿ ಮಮತ ಮಾಹಿತಿ ನೀಡಿದರು. ನಂತರ ಸಂಘದ ಆಡಳಿತ ಮಂಡಳಿಯ ಪರವಾಗಿ ಡಾ.ವೈ.ಎಂ.ರೆಡ್ಡಿ ಮಾಹಿತಿ ನೀಡಿದರು. ಕಾಲೇಜು ಅಭಿವೃದ್ಧಿ ಕುರಿತಾದ ಮಾತುಕತೆ ನಡೆಸಿತು. ಕಾಲೇಜಿನ ಕಟ್ಟಡ, ವಿದ್ಯಾರ್ಥಿಗಳಿಗೆ ಸೌಲಭ್ಯಗಳು, ಶೈಕ್ಷಣಿಕ ಚಟುವಟಿಕೆಗಳು ಹಾಗೂ ಶಿಕ್ಷಣದ ಗುಣಮಟ್ಟದ ಕುರಿತು ನ್ಯಾಕ್ ತಂಡ ಪರಿಶೀಲನೆ ನಡೆಸಿತು. ಕಾಲೇಜಿನ ಹಳೆ ವಿದ್ಯಾರ್ಥಿಗಳು, ಪಾಲಕರ ಸಭೆಗಳ ಸಾಧನೆಗಳ ಬಗ್ಗೆಯೂ ಸಮಿತಿ ಮಾಹಿತಿ ಪಡೆಯಿತು. ಸಂಜೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಪರಿಶೀಲನೆ ನಡೆಸಿತು. ಕಾಲೇಜಿನ ನಾನಾ ವಿಭಾಗಗಳು, ಕಚೇರಿ ದಾಖಲೆಗಳ ಪರಿಶೀಲನೆ ಮಾಡಿದ ನಂತರ ಮೌಲ್ಯಾಂಕನ ಗುಪ್ತ ವರದಿಯನ್ನು ನ್ಯಾಕ್ ಕಚೇರಿಗೆ ಸಲ್ಲಿಸಿತು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರಿಗೆ ಉತ್ತಮ ಶಿಕ್ಷಣ ಒದಗಿಸುವ ದೃಷ್ಟಿಯಿಂದ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಆರಂಭಿಸಿರುವ ಪದವಿ ಕಾಲೇಜಿನಲ್ಲಿ ಸೈನ್ಸ್, ಆರ್ಟ್ಸ್ ಹಾಗೂ ಕಾಮರ್ಸ್ ವಿಭಾಗದಲ್ಲಿ ಶಿಕ್ಷಣ ನೀಡಲಾಗುತ್ತಿದೆ. 37 ವರ್ಷಗಳ ಹಿಂದೆ ಬೆರಳೆಣಿಕೆಯ ಮಂದಿ ವಿದ್ಯಾರ್ಥಿಗಳಿಂದ ಆರಂಭಗೊಂಡ ಕಾಲೇಜಿನಲ್ಲಿ ಈಗ 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಕಾಲೇಜು ಕೆಲವೇ ವರ್ಷಗಳಲ್ಲಿ ಎಲ್ಲ ವಿಭಾಗಗಳಲ್ಲೂ ಉತ್ತಮ ಸಾಧನೆ ಪ್ರದರ್ಶಿಸಿದೆ.