ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿರುವ ರೌಂಡ್ ಟೇಬಲ್ ಇಂಡಿಯಾ

ಬೆಂಗಳೂರು,: ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿರುವ ರೌಂಡ್ ಟೇಬಲ್ ಇಂಡಿಯಾ (ಆರ್ಟಿಐ) ಮತ್ತು ಲೇಡೀಸ್ ಸರ್ಕಲ್ ಇಂಡಿಯಾ (ಎಲ್ಸಿಐ) ಸಂಸ್ಥೆಗಳು ಡೋನರ್ಸ್ ಅಡಮಾಸ್ ಬಿಲ್ಡರ್ಸ್ ಪ್ರೈ.ಲಿ. (ಮೇಪಲ್ ಟ್ರೀ ಪ್ರಾಪರ್ಟಿ), ಬೆಂಗಳೂರು ರೌಂಡ್ ಟೇಬಲ್ 07 ಮತ್ತು ಬೆಂಗಳೂರು ಲೇಡೀಸ್ ಸರ್ಕಲ್ 19 ಸಹಯೋಗದಲ್ಲಿ ಬೆಂಗಳೂರಿನ ಅಗ್ರಸೇನ್ ಆಸ್ಪತ್ರೆ ಮತ್ತು ಜಯದೇವ ಆಸ್ಪತ್ರೆಗಳಿಗೆ 30 ಲಕ್ಷ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ದೇಣಿಗೆ ನೀಡಿವೆ. ಕೋವಿಡ್-19 ಸೋಂಕಿನಿಂದ ಬಳಲುತ್ತಿರುವ ಬಡವರ ಚಿಕಿತ್ಸೆಗಾಗಿ ಈ ಉಪಕರಣಗಳನ್ನು ಬಳಸಲಾಗುತ್ತದೆ.

ದಾನಿಗಳಿಗೆ ಧನ್ಯವಾದ ಅರ್ಪಿಸಿರುವ ಅಗ್ರಸೇನ್ ಆಸ್ಪತ್ರೆಯ ಅಧ್ಯಕ್ಷ ಸತೀಶ್ ಜೈನ್, “ಅಡಮಾಸ್ ಬಿಲ್ಡರ್ಸ್, ರೌಂಡ್ ಟೇಬಲ್ ಇಂಡಿಯಾ ಹಾಗೂ ಲೇಡೀಸ್ ಸರ್ಕಲ್ ಇಂಡಿಯಾ ವತಿಯಿಂದ ನಾವು ಸುಮಾರು 15 ಲಕ್ಷ ರೂ. ಮೌಲ್ಯದ ಒಂದು ವೆಂಟಿಲೇಟರ್ ಹಾಗೂ ನಾಲ್ಕು ಮಾನಿಟರ್ಗಳನ್ನು ಸ್ವೀಕರಿಸಿದ್ದೇವೆ. ಇವುಗಳನ್ನು ಪಡೆದುಕೊಳ್ಳುವಲ್ಲಿ ನೆರವಾದ ನಮ್ಮ ಟ್ರಸ್ಟಿಗಳಿಗೆ ಧನ್ಯವಾದಗಳು” ಎಂದು ಹೇಳಿದ್ದಾರೆ.

ಮೇಪಲ್ ಟ್ರೀ, ರೌಂಡ್ ಟೇಬಲ್ ಇಂಡಿಯಾ ಹಾಗೂ ಲೇಡೀಸ್ ಸರ್ಕಲ್ ಇಂಡಿಯಾ ಸಂಸ್ಥೆಗಳು ಸಮಾಜದ ಬಗ್ಗೆ ಹೊಂದಿರುವ ಕಳಕಳಿ, ಔದಾರ್ಯ ಹಾಗೂ ಈ ಸಂಸ್ಥೆಗಳ ಸದಸ್ಯರ ಮಾನವೀಯ ನೆರವಿನ ಮನೋಭಾವವನ್ನು ಶ್ಲಾಘಿಸಿರುವ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ| ಮಂಜುನಾಥ್, “ಮೇಪಲ್ ಟ್ರೀ, ರೌಂಡ್ ಟೇಬಲ್ ಹಾಗೂ ಲೇಡೀಸ್ ಸರ್ಕಲ್ ಇಂಡಿಯಾ ಸಂಸ್ಥೆಗಳು ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋಗೆ ಉದಾರ ನೆರವು ನೀಡಿವೆ. ಇವು ನೀಡಿರುವ ವೈದ್ಯಕೀಯ ಉಪಕರಣಗಳು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರ ಜೀವ ಉಳಿಸಲು ನೆರವಾಗಲಿವೆ. ಇನ್ನು ಮುಂದೆಯೂ ಕೂಡ ಹೆಚ್ಚಿನ ನೆರವು ನೀಡುವುದಿದ್ದರೆ ಈ ಸಂಸ್ಥೆಗಳ ಜೊತೆಗೆ ಜಯದೇವ ಆಸ್ಪತ್ರೆಯು ಸಂತೋಷದಿಂದ ಕೈಜೋಡಿಸಲಿದೆ” ಎಂದು ಹೇಳಿದ್ದಾರೆ.

ವೈದ್ಯಕೀಯ ಉಪಕರಣಗಳನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ರೌಂಡ್ ಟೇಬಲ್ ಇಂಡಿಯಾ ಮತ್ತು ಲೇಡೀಸ್ ಸರ್ಕಲ್ ಇಂಡಿಯಾ ವತಿಯಿಂದ ಸ್ವಪ್ನಾ (ಲೇಡೀಸ್ ಸರ್ಕಲ್ ರಾಷ್ಟ್ರೀಯ ಅಧ್ಯಕ್ಷೆ), ಸಂದೇಶ್ (ಏರಿಯಾ 6 ಚೇರ್ಮನ್), ಸಿಮ್ರಿತಾ (ಏರಿಯಾ 6 ವೈಸ್ ಚೇರ್ಮನ್), ಪರಶುರಾಮ್ (ಬೆಂಗಳೂರು ರೌಂಡ್ ಟೇಬಲ್ 7 ಚೇರ್ಮನ್), ತುಳಸಿ (ಲೇಡೀಸ್ ಸರ್ಕಲ್ 19 ಚೇರ್ಮನ್), ವೈಭವ್ ಅರೋರಾ (ಏರಿಯಾ ಪ್ರಾಜೆಕ್ಟ್ಸ್ ಕನ್ವೀನರ್), ಹಿಮಾಂಶು (ರೌಂಡ್ ಟೇಬಲ್ ಇಂಡಿಯಾದ ನಿವೃತ್ತ ರಾಷ್ಟ್ರೀಯ ಅಧ್ಯಕ್ಷ), ಶ್ರವಣ್ (ರೌಂಡ್ ಟೇಬಲ್ 7 ಮಾಜಿ ಚೇರ್ಮನ್) ಹಾಗೂ ರೌಂಡ್ ಟೇಬಲ್ 7ನ ಮಾಜಿ ಸದಸ್ಯ ಸಚಿನ್ ಉಪಸ್ಥಿತರಿದ್ದರು.

30 ಲಕ್ಷ ರೂ. ಮೌಲ್ಯದ ಉಪಕರಣಗಳನ್ನು ಅಗ್ರಸೇನ್ ಮತ್ತು ಜಯದೇವ ಆಸ್ಪತ್ರೆಗೆ ದೇಣಿಗೆ ನೀಡಿರುವ ಅಡಮಾಸ್ ಬಿಲ್ಡರ್ಸ್ ಪ್ರೈ.ಲಿ. ಸಂಸ್ಥೆಗೆ ಇದೇ ಸಂದರ್ಭದಲ್ಲಿ ರೌಂಡ್ ಟೇಬಲ್ ಇಂಡಿಯಾ ಮತ್ತು ಲೇಡೀಸ್ ಸರ್ಕಲ್ ಇಂಡಿಯಾ ಸಂಸ್ಥೆಗಳ ಪದಾಧಿಕಾರಿಗಳು ಧನ್ಯವಾದ ಸಲ್ಲಿಸಿದ್ದಾರೆ. ಕೊರೋನಾದಂತಹ ವಿಪತ್ತಿನ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ವೈದ್ಯಕೀಯ ಮೂಲಸೌಕರ್ಯದ ನೆರವು ನೀಡುವ ಮೂಲಕ ಸಮಾಜದ ಒಳಿತಿಗಾಗಿ ಇನ್ನು ಮುಂದೆಯೂ ಶ್ರಮಿಸುತ್ತೇವೆ ಎಂದೂ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!