ಓರ್ವ ವ್ಯಕ್ತಿಗೆ ತಿಂಗಳಿಗೆ 5 ಕೆ.ಜಿ ಅಕ್ಕಿ ಸಾಕು, ನಾನು ಕೂಡ 2 ಚಪಾತಿ ತಿಂದು ಸ್ವಲ್ಪ ಅನ್ನ ಉಣ್ಣುತ್ತೆನೆ ಎಂಬ ಆಹಾರ ಸಚಿವರು ನೀಡಿರುವ ಹೇಳಿಕೆ ಉಢಾಫೆತನದ ಹೇಳಿಕೆಯಾಗಿದೆ. ನಿಮ್ಮ ಆಹಾರ ಪದ್ದತಿ ನಿಮ್ಮ ವೈಯಕ್ತಿಕ, ನೀವು ಉಪವಾಸವಿದ್ದರೆ ರಾಜ್ಯದ ಜನರು ಉಪವಾಸವಿರಬೇಕೆ ಎಂದು ಡಾ.ರಫೀಕ್ ಅಹ್ಮದ್ ಪ್ರಶ್ನಿಸಿದ್ದಾರೆ.
ಹಸಿವಿನ ಬೆಲೆಯೇ ಗೊತ್ತಿರದ ವ್ಯಕ್ತಿ ಆಹಾರ ಸಚಿವರಾಗಿರುವುದು ಈ ನಾಡಿನ ಜನರ ದೌರ್ಭಾಗ್ಯವಾಗಿದೆ. ಕಾಂಗ್ರೆಸ್ ಸರ್ಕಾರವಿದ್ದಾಗ ಸಿದ್ದರಾಮಯ್ಯನವರು ಅನ್ನಭಾಗ್ಯದ ಯೋಜನೆಯಡಿ 7 ಕೆಜಿ ಅಕ್ಕಿ ನೀಡುವ ಮೂಲಕ ಬಡಜನರ ಹಸಿವು ನೀಗಿಸಿ ಹಸಿವು ಮುಕ್ತ ಕರ್ನಾಟಕ ಮಾಡಿದ್ದರು. ಆದರೆ ಈಗಿನ ಬಿಜೆಪಿ ಸರ್ಕಾರದವರು ಅನ್ನಭಾಗ್ಯಕ್ಕೆ ಕತ್ತರಿ ಹಾಕುವ ಮೂಲಕ ಹಸಿವು ಯುಕ್ತ ಕರ್ನಾಟಕ ಮಾಡಲು ಹೊರಟಿದ್ದಾರೆ. ಕೊರೊನಾ ದುಷ್ಪರಿಣಾಮದಿಂದ ಉದ್ಯೋಗ ಕಳೆದುಕೊಂಡು ಕೂಲಿಯಿಲ್ಲದೆ ಜನರು ಪರಿತಪಿಸುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಸಚಿವರ ಹೇಳಿಕೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆಹಾರ ಸಚಿವರೇ ಕೂಡಲೇ ನಿಮ್ಮ ನಿರ್ಧಾರ ಬದಲಿಸಿ, ಈಗ ನೀಡುತ್ತಿರುವ 5 ಕೆಜಿ ಗೆ ಬದಲಾಗಿ 7 ಕೆಜಿ ಅಕ್ಕಿ ನೀಡಬೇಕೆಂದು ಮಾಜಿ ಶಾಸಕರು ಒತ್ತಾಯಿಸಿದ್ದಾರೆ.