ತುಮಕೂರು: ಮೈಸೂರು ಯುವತಿಯ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆಯು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ಮತ್ತು ಕೆಲವು ಶಾಸಕರು ನೀಡಿರುವ ಹೇಳಿಕೆ ನಿಜಕ್ಕೂ ರಾಜ್ಯದ ಜನತೆ ತಲೆ ತಗ್ಗಿಸುವಂತೆ ಮಾಡಿದೆ. ತುಮಕೂರು ಗ್ರಾಮಾಂತರದಲ್ಲಿಯೂ ಸಹ ಕೆಲಸಕ್ಕೆಂದು ತೆರಳುತ್ತಿದ್ದ ಒಂಟಿ ಮಹಿಳೆ ಮೇಲೆ ಹಗಲು ಹೊತ್ತಿನಲ್ಲಿಯೇ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾರೆ. ಹಲವೆಡೆ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ಶೋಚನೀಯವಾಗಿದೆ. ಕರ್ನಾಟಕ ರಾಜ್ಯ ಹೆಣ್ಣು ಮಕ್ಕಳ ರಕ್ಷಣೆಯಲ್ಲಿ ಮತ್ತು ಕಾನೂನು ಸುವ್ಯವಸ್ಥೆಯಲ್ಲಿ ದೇಶಕ್ಕೇ ಮಾದರಿಯಂತಿತ್ತು ಆದರೆ ಈಗ ಭ್ರಮನಿರಸವಾಗಿದೆ ಎಂದು ಮಾಜಿ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.
ಅನೈತಿಕತೆಯಿಂದ ಅಧಿಕಾರಕ್ಕೆ ಬಂದಿರುವ ಈ ಸರ್ಕಾರ ಕೇವಲ ಅಧಿಕಾರ ಉಳಿಸಿಕೊಳ್ಳುವಲ್ಲಿ ಮತ್ತು ಶಾಸಕರ ಮನವೊಲಿಸುವ ಕೆಲಸ ಮಾಡುತ್ತಿರುವುದು ಬಿಟ್ಟರೆ ರಾಜ್ಯದ ಹಿತದೃಷ್ಟಿಯಿಂದ ಯಾವುದೇ ನಿರ್ಣಯ ತಗೆದುಕೊಳ್ಳುತ್ತಿಲ್ಲ. ಇದರ ಪರಿಣಾಮ ರಾಜ್ಯಾದ್ಯಂತ ಹಲವೆಡೆ ಇಂತಹ ಅತ್ಯಾಚಾರ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ. ಸರ್ಕಾರದ ದುರಾಡಳಿತದಿಂದ ಭದ್ರತೆಯ ವಿಚಾರದಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಿರುವ ರಾಜ್ಯದ ಜನತೆಗೆ ಅಭದ್ರತೆ ಮೂಡಿದೆ. ಆದ್ದರಿಂದ ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಿ ಎಚ್ಚರಿಕೆಯ ಸಂದೇಶ ರವಾನಿಸಬೇಕೆಂದು ಡಾ.ರಫೀಕ್ ಅಹ್ಮದ್ ಒತ್ತಾಯಿಸಿದ್ದಾರೆ.