ಕಾಶ್ಮೀರದ ಎತ್ತರ ನಿಲುವಿನ ಸುಂದರ ಜನರನ್ನು ನೋಡುತ್ತ ಸಾಗಿದೆವು, ಎಲ್ಲರೂ ಓವರ್ ಸೈಜಿನ ನಿಲುವಂಗಿ ತೊಟ್ಟಿದ್ದಂತೆ ಕಂಡಿತ. ವಿಪರೀತ ಛಳಿಯಿರುವುದರಿಂದ ಉಣ್ಣೆಯ ಸ್ವೆಟರ್ ಬದಲು ಈ ದೊಡ್ಡ ದೊಡ್ಡ ಅಂಗಿಗಳನ್ನು ಪ್ರತಿಯೊಬ್ಬರೂ ಹಾಕಿಕೊಂಡಿರುತ್ತಾರೆ. ಇಲ್ಲಿನ ಜನರನ್ನು ನೋಡುತ್ತಿದ್ದರೆ ಒಬ್ಬರಿಗೆ ಬಲಗೈಯೇ ಇಲ್ಲದೇ ಕೇವಲ ದೊಡ್ಡ ನಿಲುವಂಗಿಯ ತೋಳು ಮಾತ್ರ ನೇತಾಡುತ್ತಿರುವುದು ಕಣ್ಣಿಗೆ ಕಾಣುತ್ತದೆ, ಇಂತಹ ಅನೇಕರು ಕಂಡು ಆಶ್ಚರ್ಯವೆನ್ನಿಸುವುದು. ಇವರಿಗೆ ಕೈ ಇಲ್ಲ ಎಂದಂತಲ್ಲಾ, ಎಲ್ಲರಿಗೂ ಕೈ ಇದೆ. ಒಳಗೆ ಇಟ್ಟುಕೊಂಡಿರುತ್ತಾರೆ. ಒಂದು ಕೈಯಲ್ಲಿ ಕಾಂಗ್ರಿಯನ್ನು ಹಿಡಿದುಕೊಂಡಿರುತ್ತಾರೆ. ಏನದು ಕಾಂಗ್ರಿ ಎನ್ನುವ ಕುತೂಹಲ ಕಾಡ ತೊಡಗಿತು.
ಅದೊಂದು ಪುಟ್ಟ ಮಡಿಕೆ
ಕಾಂಗ್ರಿ ಎನ್ನುವುದು ಬೆತ್ತದ ಹೆಣಿಗೆಯ ಹೊದಿಕೆ ಇರುವ ಒಂದು ಪುಟ್ಟ ಮಡಿಕೆ. ಇದರಲ್ಲಿ ಕಲ್ಲಿದ್ದಲು ತುಂಬಿ ಮಧಯೆ ಒಂದು ಕೆಂಡ ಹಾಕಿಕೊಂಡು ತಾವು ಹಾಕಿಕೊಂಡಿರುವ ಫೆರಾನ್ ಎನ್ನುವ ಓವರ್ ಕೋಟಿನ ಒಳಗೆ ಇಟ್ಟುಕೊಂಡು ಬಿಟ್ಟರೆ ಸುಮಾರು ಗಂಟೆಗಳ ಕಾಲ ಬೆಚ್ಚಗಿರಿಸುವ ಒಂದು ಅದ್ಭುತ ಸಾಧನ. ಕೊರೆಯುವ ಛಳಿಯಲ್ಲಿ ಜನರನ್ನು ಬೆಚ್ಚಗಿರಿಸುವ, ಕಾಲದ ಪರೀಕ್ಷೆಯಲ್ಲಿ ಗೆದ್ದು ಬಂದಿರುವ ಏಕೈಕ ಉಪಕರಣ ಈ ಕಾಂಗ್ರಿ.
ಸುಮಾರು ಆರು ಇಂಚು ವ್ಯಾಸವುಳ್ಳ ಪುಟ್ಟ ಮಡಿಕೆಯನ್ನು ಕುಂಬಾರರು ಮಾಡಿ ನಂತರ ಬೆತ್ತದ ಕೆಲಸ ಮಾಡುವ ಕುಶಲ ಕರ್ಮಿಗಳಿಗೆ ನೀಡುತ್ತಾರೆ. ಈ ಕುಶಲ ಕರ್ಮಿಗಳು ಮಡಿಕೆಯ ಸುತ್ತಲೂ ಬೆತ್ತವನ್ನು ಹೆಣೆಯುತ್ತಾರೆ. ಬಿಸಿ ತಾಗದಂತೆ ಹಿಡಿದುಕೊಳ್ಳಲು ಅನುವಾಗುವಂತೆ ಎರಡು ಹಿಡಿಕೆಗಳನ್ನು ಮಾಡಿ ಒಂದಕ್ಕೊಂದು ಸೇರಿಸಿ, ಬೆತ್ತಕ್ಕೆ ಬಣ್ಣ ಹಾಕಿ ನೋಡಲು ಆಕರ್ಷಕವಾಗಿಸುತ್ತಾರೆ. ಈ ಮಡಿಕೆಯಲ್ಲಿ ಕಲ್ಲಿದ್ದಲನ್ನು ತುಂಬಿ ಮಧ್ಯೆ ಒಂದೆರಡು ಕೆಂಡವನ್ನು ಹಾಕಿಕೊಂಡರೆ ಸಿದ್ಧವಾಯಿತು ಕಾಶ್ಮೀರಿ ಜನರು ಎಲ್ಲಿಗೆಂದರಲ್ಲಿ ಕೊಂಡೊಯ್ಯಬಹುದಾದದ ಪುಟ್ಟ ಹೀಟರ್! (ಕಾಶ್ಮೀರಿಗಳು ಬುಟ್ಟಿ ಹೆಣಿಗೆಯಲ್ಲೂ ಎತ್ತಿದ ಕೈ. ಅಲ್ಲಿಯ ಮಾರುಕಟ್ಟೆಗಳಲ್ಲಿ ಥರಹೇವಾರಿ ಹೆಣಿಗೆಯ ಬುಟ್ಟಿಗಳು ಸಿಗುತ್ತವೆ).
ಈ ಹೀಟರ್‌ನ್ನು ತಾವು ಧರಿಸಿರುವ ದೊಡ್ಡ ನಿಲುವಂಗಿಯಂತಹ ಫೆರಾನ್ ಒಳಗೆ ಅಥವಾ ಹೊದ್ದಿರುವ ರಗ್ಗಿನ ಒಳಗೆ ಇಟ್ಟುಕೊಂಡರೆ, ಹಾಕುವ ಇದ್ದಿಲಿನ ಗುಣಮಟ್ಟವನ್ನು ಅವಲಂಬಿಸಿ 20 ರಿಂದ 22 ಗಂಟೆಗಳ ತನಕ ಕಾಂಗ್ರಿ ಇವರನ್ನು ಬೆಚ್ಚಗಿರಸಬಲ್ಲದು! ಧರಿಸಿರುವ ನಿಲುವಂಗಿಯ ಒಳಗೆ ತಾಪಮಾನವನ್ನು 150ಡಿಗ್ರಿ ಫ್ಯಾರೆನ್ ಹೀಟ್ ಅಥವಾ 66 ಡಿಗ್ರಿ ಸೆಲ್ಸಿಯಸ್‌ನವರೆಗೆ ಹೆಚ್ಚಿಸಿ ಸುತ್ತಲಿನ -೮ ರಿಂದ -೧೦ ರವರೆಗೂ ಇಳಿಯಬಹುದಾದ, ಮೂಳೆಗಳನ್ನು ಕೊರೆಯುವಂಥ ಛಳಿಯಿಂದ ಇವರನ್ನು ಕಾಪಾಡಬಲ್ಲದು. ಕಾಂಗ್ರಿಯಲ್ಲಿನ ಕೆಂಡವನ್ನು ಮೇಲೆ ಕೆಳಗೆ ಮಡಲು ಪುಟ್ಟದೊಂದು ಸೆಲಾನ್ ಎಂದು ಕರೆಯುವ ಚುಚ್ಚುಗವನ್ನು ದಾರದಿಂದ ಕಟ್ಟಿರುತ್ತಾರೆ.
ಇದು ಸರಳ, ಸುಲಭ ಹಾಗೂ ಕೈಗೆಟಕುವ ಬೆಲೆಯ, ಪರಿಣಾಮಕಾರಿಯಾದ ಉಪಕರಣವಾಗಿದೆ. ಇತ್ತೀಚೆಗೆ ಬಾಯ್ಲರ್‌ಗಳು, ಎಲ್‌ಪಿಜಿ ಗ್ಯಾಸ್ ಹೀಟರ್‌ಗಳು ಹಾಗೂ ಎಲೆಕ್ಟ್ರಿಕ್ ಬ್ಲಾಂಕೆಟ್‌ಗಳು ಬಂದಿವೆಯಾದರೂ ಇವನ್ನು ಕಾಂಗ್ರಿಯಂತೆ ಎಲ್ಲಿಗೆ ಬೇಕೆಂದರಲ್ಲಿಗೆ ಕೊಂಡೊಯ್ಯಲು ಸಾಧ್ಯವಿಲ್ಲವಾದ್ದರಿಂದ ಕಾಂಗ್ರಿಗೆ ಪ್ರತಿ ಸ್ಪರ್ಧಿಯೇ ಇಲ್ಲವೆನ್ನಬಹುದು.
ಇಟಲಿಯಲ್ಲಿ ಸ್ಯಾಲ್ಡಿನೋ
ಕಾಂಗ್ರಿಯನ್ನು ಕಾಶ್ಮೀರ ಬಿಟ್ಟರೆ ಇಟಲಿಯಲ್ಲಿ ಉಪಯೋಗಿಸಲಾಗುತ್ತದೆ. ಅಲ್ಲಿ ಈ ಉಪಕರಣವನ್ನು ಸ್ಯಾಲ್ಡಿನೋ ಎಂದು ಕರೆಯುತ್ತಾರೆ. ಮುಘಲರ ಕಾಲದಲ್ಲಿ ಭೇಟಿ ನೀಡುತ್ತಿದ್ದ ಇಟಲು ಹಾಗೂ ಸ್ಪೇನ್ ದೇಶದವರಿಂದ ಈ ಪರಿಕರದ ಪರಿಚಯ ಕಾಶ್ಮೀರಿಗಳಿಗೂ ಆಗಿರಬಹುದು ಎಂದು ಊಹಿಸಲಾಗಿದೆ. ಆದರೆ ಇದಕ್ಕೆ ಯಾವುದೇ ಪುರಾವೆ ಇಲ್ಲದಿದ್ದರೂ ಕಾಂಗ್ರಿಗಳ ಬಳಕೆ ಮುಘಲರ ಕಾಲದಲ್ಲಿ ಇತ್ತೆಂಬುದು ತಜ್ಞರ ಅಭಿಪ್ರಾಯ. ಕಾಂಗ್ರಿಯ ಪರಿಕಲ್ಪನೆಯನ್ನು ಇಟಲಿಯಿಂದ ಮೂಡಿಬಂದರೂ ಕಾಶ್ಮೀರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಅಭಿವೃದ್ಧಿ ಪಡಿಸಿಕೊಂಡಿದ್ದಾರೆ ಎನ್ನಬಹುದು.
ಪ್ರತಿ ಕಾಶ್ಮೀರಿಯೂ ಅತ್ಯಂತ ಜಾಣತನದಿಂದ ಈ ಕೆಂಡದ ಮಡಿಕೆಯನ್ನು ಕ್ಷೇಮವಾಗಿ ಸದಾ ತಮ್ಮ ಉಡುಪಿನೊಳಗೆ ಇಟ್ಟುಕೊಂಡಿರಬಲ್ಲರು.
ನಾವು ಗುಲ್‌ಮಾರ್ಗ್‌ನಿಂದ ಶ್ರೀನಗರಕ್ಕೆ ಬರುವಾಗ ಟಾಂಗ್‌ಮಾರ್ಗ್ ಬಳಿಯಲ್ಲಿ ಬಟ್ಟೆಗಳನ್ನು ಖರೀದಿಸಲು ಒಂದು ಸೊಸೈಟಿಗೆ ಹೋಗಿದ್ದೆವು, ಅಲ್ಲಿ ಹಾಸಿಗೆಯ ಮೇಲೆ ಕುಳಿತು ಅತ್ಯಂತ ಬೆಲೆಬಾಳುವ ಸೀರೆಗಳನ್ನು, ಶಾಲುಗಲನ್ನು ಬೆಡ್ ಶೀಟ್‌ಗಳನ್ನು ತೋರಿಸುವವರು ಕೂಡ ತಮ್ಮ ಕಾಲುಗಳ ಮಧ್ಯೆ ಕಾಂಗ್ರಿಯನ್ನು ಇಟ್ಟುಕೊಂಡಿದ್ದರು! ಬರೀ ಇಷ್ಟೇ ಅಲ್ಲ, ಕೆಲವರು ಮಲಗುವಾಗಲೂ ಎದೆ ಮೇಲೆ ಕಾಂಗ್ರಿಯನ್ನು ಇಟ್ಟುಕೊಂಡೇ ಮಲಗುತ್ತಾರಂತೆ, ನಿದ್ದೆಯಲ್ಲಿ ಹೊರಳಾಡಿಬಿಟ್ಟಾಗ ಅನಿರೀಕ್ಷಿತವಾಗಿ ಕಾಂಗ್ರಿ ಬಿದ್ದು ಎದೆಯ ಮೇಲೆ ಸುಟ್ಟ ಗಾಯಗಳಾಗಿರುವುದೂ ಉಂಟಂತೆ!
ಅದಕ್ಕೂ ಒಂದು ಹಬ್ಬ
ಕಾಶ್ಮೀರಿ ಪಂಡಿತರು ಛಳಿಗಾಲದ ಕೊನೆಯಲ್ಲಿ ಟೀಲಾ ಏಥಂ ಎನ್ನುವ ಹಬ್ಬದ ಆಚರಣೆಯಲ್ಲಿ ಈ ಕಾಂಗ್ರಿಗಳನ್ನೆಲ್ಲಾ ಗುಡ್ಡೆ ಹಾಕಿ ಸುಡುವ ವಿಶಿಷ್ಠ ಸಂಪ್ರದಾಯವಿದೆಯಂತೆ! ಬಹುಶಃ ಮೂಳೆ ಕೊರೆಯುವ ಅಸಹನೀಯ ಯಮ ಛಳಿಗಾಲದ ಅಂತ್ಯವಾಯಿತೆಂದು ಸಂತೋಷದಿಂದ, ಕೇವಲ ಒಂದು ಸೀಸನ್ನಿನವರೆಗೆ ಬಾಳಿಕೆ ಬರಬಹುದಾಗಿದ್ದ ಅಂದಿನ ಕಾಂಗ್ರಿಗಳನ್ನು ಬೆಂಕಿಗೆ ಹಾಕಿ ಸಂಭ್ರಮ ಪಡುತ್ತಿದ್ದಾರೆನೋ? ಮುಂದೆ ಅದೇ ಒಂದು ಸಂಪ್ರದಾಯವಾಗಿ ಬೆಳೆದಿರಬಹುದು.
ಕಾಂಗ್ರಿಗಳ ಬೆಲೆ ಕೇವಲ 50-100 ರೂಪಾಯಿಗಳಿಂದ ಇಪ್ಪತ್ತು ಸಾವಿರದವರೆಗೂ ಇದೆ ಎಂದರೆ ನೀವು ನಂಬಲೇಬೇಕು. ಅತ್ಯಂತ ಕನಿಷ್ಠ ಗುಣಮಟ್ಟದ ಬೆತ್ತ ಉಪಯೋಗಿಸಿ ಮಾಡಿದ ಕಾಂಗ್ರಿ ಕೇವಲ ನೂರು ರೂಪಾಯಿಗೆ ದೊರಕಿದರೆ, ಬೆತ್ತದ ಬದಲು ಬೆಳ್ಳಿ ತಂತಿಗಳಿಂದ ಹೆಣೆಗೆ ಮಾಡಿರುವ ಜೊತೆಗೆ ಬೆಲೆಬಾಳುವ ಮುತ್ತು ರತ್ನಗಳನ್ನು ಪೋಣಿಸಿರುವ ಅಲಂಕಾರಿಕ ಕಾಂಗ್ರಿ ಅತ್ಯಂತ ದುಬಾರಿಯಾಗಿರುತ್ತದೆ. ಇಂಥ ಕಾಂಗ್ರಿಗಳನ್ನು ಸಾಮಾನ್ಯವಾಗಿ ಮದುವೆಯಲ್ಲಿ ತಮ್ಮ ಹೆಣ್ಣು ಮಕ್ಕಳಿಗೆ ಬಳುವಳಿಯಾಗಿ ಶ್ರೀಮಂತರು ಕೊಡುವುದುಂಟು. ಇದರಲ್ಲಿನ ಸೆಲಾನ್ ಬೆಳ್ಳಿಯದಾಗಿದ್ದು ಅದನ್ನು ಬೆಳ್ಳಿಯ ಸರಪಣಿಯಿಂದಲೇ ಬಿಗಿದಿರಲಾಗಿರುತ್ತದೆ.
ಕಾಂಗ್ರಿ ಕಾಶ್ಮೀರಿಗಳಿಗೆ ತಮ್ಮನ್ನು ತಾವು ಬೆಚ್ಚಗಿರಿಸಿಕೊಳ್ಳಲು ಅನಿವಾರ್ಯವಾದ ದೇಹದ ಅವಿಭಾಜ್ಯ ಅಂಗವಾಗಿದೆ. ಅವರ ಜೀವನ ಪದ್ಧತಿಯಲ್ಲಿ ಹಾಸುಹೊಕ್ಕಾಗಿ ಕಾಶ್ಮೀರಿ ಸಂಸ್ಕೃತಿಯ ಭಾಗವೇ ಆಗಿಬಿಟ್ಟಿದೆ. ಛಳಿಯಿಂದ ರಕ್ಷಣೆ ನೀಡುವ ಬೇರಾವುದೇ ಉಪಕರಣಗಳು ಮುಂದೆ ಬಂದರೂ ಕಾಂಗ್ರಿಯ ಪಾರಮ್ಯ ಮುಂದುವರೆಯುವುದರಲ್ಲಿ ಯಾವುದೇ ಸಂಶಯವಿಲ್ಲ.
ಆದರೂ ಇತ್ತೀಚಿನ ದಿನಗಳಲ್ಲಿ ಹೆಣೆಗೆಗೆ ಬಳಸುವ ಬೆತ್ತದ ಕಡ್ಡಿಗಳ ಲಭ್ಯತೆ ಕಡಿಮೆಯಾಗುತ್ತಿದೆ. ಬೆತ್ತದ ಕಡ್ಡಿಗಳನ್ನು ಕತ್ತರಿಸುವಾಗ ಅಜಾಗರೂಕರಾಗಿದ್ದರೆ ಗಿಡವೇ ನಾಶವಾಗುತ್ತದೆ. ಬರ್ಕತ್ ಅಲಿ ಕುರೇಶಿ ಎನ್ನುವ ಸಸ್ಯ ತಜ್ಞರು ಈ ಸಸ್ಯ ಪ್ರಬೇಧಗಳು ಅವೈಜ್ಞಾನಿಕವಾಗಿ ಕಡ್ಡಿಗಳನ್ನು ತೆಗೆಯುವುದರಿಂದ ಅವನತಿಯತ್ತ ಸಾಗುತ್ತಿವೆ; ಸರ್ಕಾರ ಈ ಸಸ್ಯ ಪ್ರಬೇಧಗಳ ಉಳಿವಿಗೆ, ಅವುಗಳ ಸರಿಯಾದ ಬಳಕೆಗೆ ಒತ್ತು ನೀಡುವ ಮೂಲಕ ಇವುಗಳನ್ನು ಉಳಿಸಬೇಕಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ. ಕಾಶ್ಮೀರದ ಸಂಸ್ಕೃತಿಯ ಭಾಗವಾಗಿರುವ ಕಾಂಗ್ರಿಗಳನ್ನು ಕಾಪಾಡಲು ಈ ಸಸ್ಯ ಪ್ರಬೇಧವನ್ನು ಉಳಿಸುವುದು ಅತ್ಯಾವವಶ್ಯಕವಾಗಿದೆ.
ಕಾಂಗ್ರಿಯ ಅತಿಯಾದ ಬಳಕೆ ಕಾಂಗ್ರಿ ಕ್ಯಾನ್ಸರ್ ಎನ್ನುವ ಚರ್ಮದ ಅರ್ಬುದ ರೋಗಕ್ಕೂ ಕಾರಣವಾಗಿರುವುದು ಕಂಡು ಬಂದಿದೆ. 1866ರಲ್ಲಿಯೇ ಡಬ್ಲ್ಯು.ಜಿ.ಎಲ್.ಸ್ಲೀ. ಎಂಬುವರು ಇದನ್ನು ಗಮನಿಸಿದ್ದರು, ಬಹಳ ಕಾಲ ಚರ್ಮಕ್ಕೆ ತಾಗುವ ಬಿಸಿಯಿಂದ ಈ ಅರ್ಬುದ ರೋಗ ಬರುತ್ತದೆಂದು ಮೊದಲು ಭಾವಿಸಲಾಗಿತ್ತಾದರೂ, ಇತ್ತೀಚೆಗೆ ಕಲ್ಲಿದ್ದಲು ಉರಿಯುವಾಗ ಹೊರಸೂಸುವ ಕೆಲವು ಹಾನಿಕಾರಕ ಅಂಶಗಳಿಂದ ಕಾಂಗ್ರಿ ಕ್ಯಾನ್ಸರ್ ಬರಬಹುದೆಂಬ ಶಂಕೆಯಿದೆ, ಏನೇ ಆದರೂ ಛಳಿಗಾಲದಲ್ಲಿ ರೆಫ್ರಿಜರೇಟರಿಗಿಂತ ಕಡಿಮೆ ಉಷ್ಣಾಂಶವಿರುವ ಕಾಶ್ಮೀರದಲ್ಲಿ ಕಾಂಗ್ರಿಯಿಲ್ಲದೆ ಜೀವನವೇ ಕಷ್ಟ ಸಾಧ್ಯ ಎನ್ನುವುದು ಕಟು ಸತ್ಯ.