ಗುರು ರಾಯರ ಬಗ್ಗೆ ಎಷ್ಟು ಹೇಳಿದರೂ ಕಡಿಮೆ

ರಾಘವೇಂದ್ರ ಸ್ವಾಮಿಗಳು ಜನಿಸಿದ್ದು 1599ರಲ್ಲಿ. ತಮಿಳುನಾಡಿನ ಭುವನಗಿರಿ ಎಂಬಲ್ಲಿ. ತಂದೆ ತಿಮ್ಮಣ್ಣ ಭಟ್ಟ, ತಾಯಿ ಗೋಪಿಕಾಂಬಾ. ಹೆತ್ತವರು ಮಗುವಿಗಿಟ್ಟ ಹೆಸರು ವೆಂಕಟನಾಥ. ಬಾಲ್ಯದಲ್ಲೇ ಈತ ಬುದ್ಧಿವಂತ ಬಾಲಕ
ಆರಂಭದ ವಿದ್ಯಾಭ್ಯಾಸ ಸೋದರಮಾವನಾದ ಲಕ್ಷ್ಮಿ ನರಸಿಂಹಾಚಾರ್ಯರ ಬಳಿ ಮಧುರೈನಲ್ಲಿ ಪೂರ್ಣಗೊಂಡಿತು. ಕೋಶ, ಕಾವ್ಯ, ನಾಟಕ ವ್ಯಾಕರಣಗಳನ್ನು ಅಧ್ಯಯನ ಮಾಡಿದರು.


ಇವರು ಸಣ್ಣ ವಯಸ್ಸಿನಲ್ಲಿದ್ದಾಗಲೇ ತಂದೆ ತೀರಿಕೊಂಡ ಕಾರಣ ಸಂಸಾರದ ಜವಾಬ್ದಾರಿ ಹೆಗಲ ಮೇಲೆ ಬಿತ್ತು. ಸರಸ್ವತಿ ಎಂಬಾಕೆಯೊಂದಿಗೆ ವಿವಾಹವಾಯಿತು.
ಆ ಬಳಿಕ ಕುಂಭಕೋಣಕ್ಕೆ ಬಂದು ಶ್ರೀ ಸುಧೀಂದ್ರ ತೀರ್ಥದಲ್ಲಿ ದ್ವೈತ ವೇದಾಂತ ವ್ಯಾಸಂಗ ಆರಂಭಿಸಿದರು. ತರ್ಕ, ವ್ಯಾಕರಣ, ಮೀಮಾಂಸಾ, ವೇದಾಂತಾದಿ ಶಾಸ್ತ್ರಗಳನ್ನು ಕಲಿತರು. ಅಲ್ಲಿನ ಮಕ್ಕಳಿಗೆ ಸಂಸ್ಕೃತ ಮತ್ತು ವೇದಗಳನ್ನು ಬೋಧಿಸಿದರು. ಅದಕ್ಕೆಂದು ಮಕ್ಕಳಿಗೆ ಪ್ರತ್ಯೇಕ ಶುಲ್ಕ ವಿಧಿಸುತ್ತಿರಲಿಲ್ಲ. ಅವರು ಕೊಟ್ಟರಷ್ಟೇ ತೆಗೆದುಕೊಳ್ಳುತ್ತಿದ್ದರು.
ಹೀಗಾಗಿ ಅವರ ಆರ್ಥಿಕ ಸ್ಥಿತಿ ಮತ್ತಷ್ಟು ಕುಸಿಯಿತು. ಅದೆಷ್ಟೋ ಬಾರಿ ಮಡದಿ ಮಕ್ಕಳೊಂದಿಗೆ ಉಪವಾಸ ಮಲಗುತ್ತಿದ್ದರು. ಇರುವ ಮನೆಯೂ ಸೋರುತ್ತಿತ್ತು. ಮನೆಯಲ್ಲಿದ್ದ ಒಡಕು ಪಾತ್ರೆಗಳು ಕಳವಾದವು. ಎಲ್ಲವೂ ಹರಿಯ ಇಚ್ಛೆ ಎಂದುಕೊಂಡು ಗೊಣಗದೇ ಜೀವನ ನಡೆಸುತ್ತಿದ್ದರು.
ಅವರ ಭಕ್ತಿಯ ತೀವ್ರತೆ ಎಷ್ಟಿತ್ತು ಎಂಬುದಕ್ಕೆ ಒಂದು ಉದಾಹರಣೆ ಇದೆ ಕೇಳಿ…ಒಮ್ಮೆ ವೆಂಕಟನಾಥರಿಗೆ ಸಮಾರಂಭವೊಂದರಲ್ಲಿ ಪಾಲ್ಗೊಳುವ ಆಹ್ವಾನ ಸಿಕ್ಕಿತು. ಆದರೆ ಅಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ನೀಡದೆ ಅವರನ್ನು ಗಂಧ ಅರೆಯುವ ಕೆಲಸಕ್ಕೆ ನೇಮಿಸಲಾಯಿತು. ಅವರು ಬೇಸರಿಸಿಕೊಳ್ಳದೇ ಗಂಧದ ಕೊರಡನ್ನು ತೇಯ್ದರು. ತೇಯುವಾಗ ಪದ್ಧತಿಯ ಪ್ರಕಾರ ಅಗ್ನಿಸೂಕ್ತವನ್ನು ಪಠಿಸುತ್ತಿದ್ದರು.
ಬಳಿಕ ಆ ಗಂಧವನ್ನು ಲೇಪಿಸಿಕೊಂಡವರಿಗೆ ವಿಪರೀತ ಉರಿ ಆರಂಭವಾಯಿತು. ಹೀಗಾಗಲು ಏನು ಕಾರಣವೆಂದು ವೆಂಕಟನಾಥರನ್ನು ಪ್ರಶ್ನಿಸಿದರು. ಅಗ್ನಿ ಸೂಕ್ತ ಹೇಳುತ್ತಾ ಗಂಧ ತೇಯ್ದಿರುವುದೇ ಇದಕ್ಕೆ ಕಾರಣ ಎಂದು ಊಹಿಸಿ ಮತ್ತೆ ವರುಣ ಮಂತ್ರ ಪಠಿಸಿದಾಗ ಎಲ್ಲರ ಉರಿಯೂ ಕಡಿಮೆಯಾಯಿತು. ಇದು ಅವರ ಮಂತ್ರ ಪಠನೆಗಿದ್ದ ಶಕ್ತಿ!.
ಗುರುಗಳೊಂದಿಗೆ ಅನೇಕ ಪಾಂಡಿತ್ಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಜಯಶಾಲಿಯಾಗಿ ಮಠಕ್ಕೆ ಹೆಸರು ತಂದರು. ಗುರುಗಳಿಂದ ‘ಮಹಾಭಾಷ್ಯಕಾರ’ ಎಂಬ ಬಿರುದನ್ನೂ ಪಡೆದುಕೊಂಡರು. ಭೈರವ ಭಟ್ಟ, ವೀರಭದ್ರ ಮೊದಲಾದ ಪ್ರಸಿದ್ಧ ಪಂಡಿತರನ್ನೂ ಸೋಲಿಸಿ ಜಯಪತ್ರ ಗೆದ್ದುಕೊಂಡರು.
ಸುಧೀಂದ್ರ ತೀರ್ಥರು ವೆಂಕಟನಾಥರನ್ನೇ ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಿಸಿದರು. 1621ರಲ್ಲಿ ತಂಜಾವೂರಿನಲ್ಲಿ ತನ್ನ ಗುರುಗಳ ಸಮ್ಮುಖದಲ್ಲೇ ಸನ್ಯಾಸತ್ವ ಸ್ವೀಕರಿಸಿ ರಾಘವೇಂದ್ರ ತೀರ್ಥ ಎಂದು ನಾಮಾಂಕಿತರಾದರು. ಕುಂಭಕೋಣ ಮಠದ ಉತ್ತಾರಾಧಿಕಾರಿಯಾದರು. ಮುಂದೆ ಅನೇಕ ತೀರ್ಥಕ್ಷೇತ್ರಗಳಿಗೆ ಸಂಚರಿಸಿದರು. ಶ್ರೀರಂಗ, ಮಧುರೈ,ರಾಮೇಶ್ವರ, ತಿರುಪತಿ, ಉಡುಪಿಗೆ ಭೇಟಿ ನೀಡಿ, ನೊಂದು, ಬೆಂದ ಭಕ್ತರ ಕಷ್ಟಗಳನ್ನು ಪರಿಹರಿಸಿದರು.
ಪವಾಡ ಪುರುಷ ಎಂದೇ ರಾಘವೇಂದ್ರ ಸ್ವಾಮಿಗಳು ಹೆಸರು ಮಾಡಿದ್ದರೂ ಪ್ರಚಂಡ ವಿದ್ವಾಂಸರಾಗಿದ್ದರು. 48ಕ್ಕೂ ಹೆಚ್ಚಿನ ಅಮೂಲ್ಯ ಗ್ರಂಥಗಳನ್ನು ಬರೆದು ‘ಟಿಪ್ಪಣ್ಣಾಚಾರ್ಯ ಚಕ್ರವರ್ತಿ’ ಗಳೆಂದು ಪ್ರಸಿದ್ಧರಾದರು. ವೇದವ್ಯಾಸರ ‘ಬ್ರಹ್ಮಸೂತ್ರ’ ಗಳಿಗೆ ‘ತಂತ್ರ ದೀಪಿಕಾ’, ಮಧ್ವಾಚಾರ್ಯರ ‘ಅಣು ಭಾಷ್ಯ’ಕ್ಕೆ ‘ತತ್ತ್ವ ಮಂಜರೀ’, ವ್ಯಾಖ್ಯಾನ, ಉಪನಿಷತ್ತುಗಳಿಗೆ ‘ಖಂಡಾರ್ಥ’, ಟೀಕಾಕೃತ್ಪಾದರ ‘ನ್ಯಾಯಸುಧಾ’ ಕ್ಕೆ ‘ಪರಿಮಳ’, ಉಳಿದ ಟೀಕಾಗ್ರಂಥಗಳಿಗೆ ‘ಭಾವದೀಪ’ ಎಂಬ ವ್ಯಾಖ್ಯಾನ ರಚಿಸಿದ್ದಾರೆ.
ಚಂದ್ರಿಕಾರ್ಚಾಯರ ‘ಚಂದ್ರಿಕಾ ಗ್ರಂಥ’, ‘ತರ್ಕತಾಂಡವ’ ಗ್ರಂಥಗಳಿಗೂ ವ್ಯಾಖ್ಯಾನ ಬರೆದಿದ್ದಾರೆ. ತಾತ್ಪರ್ಯ ನಿರ್ಣಯದ ಸಂಗ್ರಹ, ಪ್ರಮೇಯ ನವಮಾಲಿಕೆಯ ವ್ಯಾಖ್ಯಾನ, ಪ್ರಾತಃ ಸಂಕಲ್ಪ ಗದ್ಯ ಮೊದಲಾದ ಸ್ವತಂತ್ರ ಗ್ರಂಥಗಳನ್ನೂ ರಚಿಸಿದ್ದಾರೆ. ನದಿ ತಾರತಮ್ಯ ಸ್ತೋತ್ರವೆಂಬ ಚಿಕ್ಕ ಗ್ರಂಥದಿಂದ ಆರಂಭಿಸಿ ಪರಿಮಳ ಗ್ರಂಥವೆಂಬ ಬೃಹತ್ ಗಾತ್ರದ ಗ್ರಂಥಗಳನ್ನೂ ರಚಿಸಿದ್ದಾರೆ.
ಪವಾಡ ಪುರುಷನೆಂದು ಹೆಸರು ಮಾಡಿದ್ದ ರಾಘವೇಂದ್ರ ಸ್ವಾಮಿಗಳನ್ನು ಹಲವರು ಪರೀಕ್ಷಿಸಿದ್ದರು. ಆದವಾನಿಯ ನವಾಬನೊಬ್ಬ ಬಟ್ಟೆ ಮುಚ್ಚಿದ್ದ ಹರಿವಾಣದಲ್ಲಿ ಮಾಂಸದೂಟವನ್ನಿಟ್ಟು ಗುರುಗಳಿಗೆ ಕೊಟ್ಟ. ಅದಕ್ಕೆ ಜಲ ಪೋಕ್ಷಣೆ ಮಾಡಿ ಬಟ್ಟೆ ಸರಿಸಿದಾಗ ಒಳಗೆ ಬಗೆಬಗೆಯ ಹಣ್ಣು ಹಂಪಲುಗಳಿದ್ದವು. ತಪ್ಪನ್ನು ತಿದ್ದಿಕೊಂಡ ನವಾಬ ಗುರುಗಳಿಗೆ ಶರಣಾದ.
ಹಿಂದೂ ಧರ್ಮದ ಬ್ರಾಹ್ಮಣ ಮಾಧ್ವ ಸಂನ್ಯಾಸಿಗಳಲ್ಲಿ ಗುರು ರಾಘವೇಂದ್ರ ಸ್ವಾಮಿಗಳೂ ಒಬ್ಬರು. ಮಧ್ವಾಚಾರ್ಯರ ಅನುಯಾಯಿಯಾಗಿ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು.1671ರಲ್ಲಿ ಆಂಧ್ರಪ್ರದೇಶದ ಮಂತ್ರಾಲಯದಲ್ಲಿ ವೃಂದಾವನ ಪ್ರವೇಶ ಮಾಡಿದರು. ವೃಂದಾವನವನ್ನು ಸಜೀವವಾಗಿ ಪ್ರವೇಶಿಸಿದ್ದ ಆ ಪ್ರದೇಶ ಇಂದು ಜಗತ್ತಿಗೇ ಪೂಜನೀಯ ಸ್ಥಳ ಎಂದರೆ ಅತಿಶಯೋಕ್ತಿಯಲ್ಲ.
ಸಾವಿರಾರು ಭಕ್ತರು ಪ್ರತಿನಿತ್ಯ ದೇವಾಲಯಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದುಕೊಂಡಿದ್ದಾರೆ.
‘ಇನ್ನೂ 400 ವರ್ಷಗಳ ಕಾಲ ನಾನಿಲ್ಲಿ ವಾಸಿಸುತ್ತೇನೆ’ ಎಂದು ಅವರು ಹೇಳಿದ್ದನ್ನು ಭಕ್ತರಿನ್ನೂ ನಂಬಿಕೊಂಡಿದ್ದಾರೆ. ‘ದೀನಜನರ ಬಡವರ, ಹಿಂದುಳಿದವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ರಾಘವೇಂದ್ರ ಸ್ವಾಮಿಗಳನ್ನು ಆರಾಧನಾ ಮಹೋತ್ಸವದ ಮೂಲಕ ಪ್ರತಿವರ್ಷ ನೆನಪಿಸಿಕೊಳ್ಳಲಾಗುತ್ತದೆ.
• ರಾಘವೇಂದ್ರ ಸ್ವಾಮಿಗಳು ಬೃಂದಾವನ ಪ್ರವೇಶಿಸುವ ಮೊದಲು ಮಾಡಿದ ಕೊನೆಯ ಪ್ರವಚನದ ಸಾರಾಂಶ:
• ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೇ ಸತ್ಕಾರ್ಯಗಳನ್ನು ಮಾಡಬೇಕು.
• ಸಮಾಜಕ್ಕೆ ಒಳಿತಾಗುವಂತೆ ಮಾಡುವುದೇ ನಿಜವಾದ ದೇವರ ಪೂಜೆ.
ಕಳೆದುಹೋದ ಒಂದು ನಿಮಿಷವೂ ಮತ್ತೆಬಾರದು ಎಂಬುದನ್ನು ಮರೆಯಬಾರದು.
• ದೇವರೆಡೆಗಿನ ನಿಮ್ಮ ಭಕ್ತಿ ಪರಿಶುದ್ಧವಾಗಿರಲಿ. ಪೂರ್ಣ ಮನಸ್ಸಿನಿಂದ ಅವನನ್ನು ಪೂಜಿಸಿ.
• ಸುಜ್ಞಾನ ಎಂಬುದು ಎಲ್ಲಾ ಪವಾಡಗಳಿಗಿಂತ ಮಿಗಿಲು.
ಜ್ಞಾನವಿಲ್ಲದಿದ್ದರೆ ಯಾವ ಪವಾಡವೂ ಘಟಿಸದು.
*ದುರ್ವಾದಿ ಧ್ವಾಂತರವಯೇ*
*ವೈಷ್ಣವೇಂದೀವರೇಂದವೇ*
*ಶ್ರೀ ರಾಘವೇಂದ್ರ ಗುರವೇ*
*ನಮೋತ್ಯಂತ ದಯಾಲವೇ*
*ಶ್ರೀಮಧ್ವೇಶಾರ್ಪಣಮಸ್ತು*

Leave a Reply

Your email address will not be published. Required fields are marked *

error: Content is protected !!