ಬೆಂಗಳೂರು : ಬೃಹತ್ ಪ್ರಮಾಣದ ‘ಭಾರತ್ ನೆಟ್’ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು ಮುಂದಿನ ಎರಡು ವರ್ಷಗಳಲ್ಲಿ ಪ್ರತಿಯೊಂದು ಗ್ರಾಮವನ್ನೂ ಡಿಜಿಟಲ್ ಸಂಪರ್ಕದ ಮೂಲಕ ಜೋಡಿಸಲಾಗುವುದು. ಬ್ರಾಡ್ಬ್ಯಾಂಡ್ ಅಂತರ್ಜಾಲ 6 ಲಕ್ಷ ಹಳ್ಳಿಗಳನ್ನು ತಲುಪಲಿದ್ದು, 2.8 ಲಕ್ಷ ಗ್ರಾಮಗಳು ಈಗಾಗಲೇ ಇದರಡಿ ಸಂಪರ್ಕ ಪಡೆದಿವೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಜನಾಶೀರ್ವಾದ ಯಾತ್ರೆ ಕುರಿತು ವಿವರಿಸಿ ಶಿವಮೊಗ್ಗದಲ್ಲಿ ಮಾತನಾಡಿದ ಅವರು, “ಇದಲ್ಲದೆ ಡಿಜಿಟಲ್ ವಿಲೇಜ್ ಪರಿಕಲ್ಪನೆಯೂ ಜಾರಿಯಲ್ಲಿದೆ. 5 ಸಾವಿರ ಗ್ರಾಮಗಳ ಪ್ರತಿ ಮನೆಗೆ ಕಡಿಮೆ ಬೆಲೆಯ ಉಪಕರಣದ ಮೂಲಕ ಮಾದರಿ ಯೋಜನೆ ಜಾರಿಗೊಳ್ಳುತ್ತಿದೆ. ಕರ್ನಾಟಕದಲ್ಲಿ ಪ್ರತಿ ಜಿಲ್ಲೆಗೊಂದು ಡಿಜಿಟಲ್ ವಿಲೇಜ್ ಇರುತ್ತದೆ” ಎಂದು ವಿವರಿಸಿದರು.
ಮನೆಯಿಂದಲೇ ಕೆಲಸ ಪರಿಕಲ್ಪನೆಯಿಂದ ಬೆಂಗಳೂರಿನ ಮೇಲಿನ ಉದ್ಯೋಗದ ಒತ್ತಡ ಕಡಿಮೆ ಆಗಲಿದೆ. ಉದ್ಯೋಗಾವಕಾಶಗಳು ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆ ಹಂಚಿಹೋಗಲಿವೆ. ಕೋವಿಡೋತ್ತರ ವಾಸ್ತವ ಇದಾಗಿದೆ. ಶಿವಮೊಗ್ಗ ಸೇರಿ ವಿವಿಧ ಜಿಲ್ಲೆಗಳಿಗೆ ಇದೊಂದು ವಿಶೇಷ ಅವಕಾಶ. ಕೌಶಲ-ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ರಾಜ್ಯಕ್ಕೆ ಒದಗಿಸಲು ತಾವು ಬದ್ಧವಿರುವುದಾಗಿ ಇದೇ ವೇಳೆ ವಿವರಿಸಿದರು.
ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿ ಒಂದೆರಡು ದಿನಗಳಲ್ಲಿ ಆಗಲಾರದು. ಆದರೆ, ಕೋವಿಡ್ ನಂತರ ವಿಶ್ವದ ವಿವಿಧ ದೇಶಗಳು ಈಗ ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಭಾರತದತ್ತ ನೋಡುತ್ತಿವೆ. 2014ರಲ್ಲಿ ದೇಶದ ಇಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆಯು 1.9 ಲಕ್ಷ ಕೋಟಿ ಇತ್ತು. 2020ರಲ್ಲಿ ಅದು 5.3 ಲಕ್ಷ ಕೋಟಿಗೆ ಏರಿದೆ. ಉತ್ಪಾದನೆ ಕ್ಷೇತ್ರದಲ್ಲಿ ಚೀನಾ ಬದಲು ಭಾರತ ಮುಂಚೂಣಿ ನೆಲೆಯಲ್ಲಿದೆ ಎಂದರು. ಬಳಕೆದಾರರ ರಕ್ಷಣೆ-ಹಿತಾಸಕ್ತಿ ಕಾಪಾಡುವ ಹೊಸ ಕಾಯಿದೆಗಳನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾರಿಗೊಳಿಸಲಾಗುತ್ತಿದೆ. ತಂತ್ರಜ್ಞಾನ ಕೌಶಲದ ಶಿಕ್ಷಣ ಇಂದಿನ ಅಗತ್ಯವಾಗಿದೆ. ನೂತನ ಶಿಕ್ಷಣ ನೀತಿಯು (ಎನ್ಇಪಿ) ಉದ್ಯೋಗಾವಕಾಶಗಳನ್ನು ನೀಡಲಿದೆ ಎಂದರು. ಇದರಡಿ ಕೌಶಲ್ಯ ಸಂಬಂಧಿ ಶಿಕ್ಷಣಕ್ಕೆ ಅವಕಾಶವಿದೆ ಎಂದು ರಾಜೀವ್ ಚಂದ್ರಶೇಖರ್ ವಿವರಿಸಿದರು.