ನವದೆಹಲಿ, : ಕೊರೊನಾ ಲಸಿಕೆಗಳು ಸೋಂಕಿನ ವಿವಿಧ ರೂಪಾಂತರಗಳ ವಿರುದ್ಧ ಸಂಪೂರ್ಣ ರಕ್ಷಣೆ ನೀಡಲು ಸಾಧ್ಯವಾಗದಿದ್ದರೂ ಸಾವಿನ ಅಪಾಯವನ್ನು ಖಂಡಿತವಾಗಿ ತಗ್ಗಿಸುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ. ಮುಂದಿನ ಕೆಲವು ತಿಂಗಳುಗಳವರೆಗೂ ಜನರು ಕೊರೊನಾ ನಿಯಮಗಳ ಪಾಲನೆಯನ್ನು ಮರೆಯಬಾರದು ಎಂಬುದನ್ನು ಇದೇ ಸಂದರ್ಭ ಪುನರುಚ್ಚರಿಸಿದ್ದಾರೆ.
ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಬೃಹತ್ ಲಸಿಕಾ ಅಭಿಯಾನ ನಡೆಸುವುದು ಸುಲಭದ ಮಾತಲ್ಲ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತ ಗಮನಾರ್ಹ ಸಾಮರ್ಥ್ಯ ತೋರಿದೆ. ಸಂಪನ್ಮೂಲಗಳ ಕೊರತೆ ಹೊರತಾಗಿಯೂ ಒಂದು ವರ್ಷದ ಒಳಗೆ ನಾವು ಒಂದಕ್ಕಿಂತ ಹೆಚ್ಚು ಕೊರೊನಾ ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದೇವೆ ಹಾಗೂ ಇತರೆ ದೇಶಗಳಿಗೂ ಲಸಿಕೆ ನೀಡುವ ಸ್ಥಿತಿಯಲ್ಲಿದ್ದೇವೆ ಎಂದರು.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರೊಂದಿಗೆ ದೇಶದ ಕೊರೊನಾ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದರು. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಕೂಡ ಸೌಮ್ಯಾ ಸ್ವಾಮಿನಾಥನ್ ಅವರನ್ನು ಭೇಟಿ ಮಾಡಿದರು. ಭಾರತದಲ್ಲಿ ಅಭಿವೃದ್ಧಿಗೊಳಿಸಲಾಗಿರುವ ಭಾರತ್ ಬಯೋಟೆಕ್‌ನ “ಕೋವ್ಯಾಕ್ಸಿನ್” ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ಸಂಬಂಧ ಮಾಂಡವಿಯಾ ಚರ್ಚೆ ನಡೆಸಿದರು. ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ನೀಡುವಂತೆ ಭಾರತ್ ಬಯೋಟೆಕ್ ವಿಶ್ವ ಆರೋಗ್ಯ ಸಂಸ್ಥೆಗೆ ಮನವಿ ಮಾಡಿ ಎಲ್ಲಾ ದಾಖಲೆಗಳನ್ನು ಸಲ್ಲಿಸಿದೆ. ಆದರೆ ಅನುಮೋದನೆ ಇನ್ನೂ ಬಾಕಿ ಇದ್ದು, ಪ್ರಕ್ರಿಯೆಗಳು ಸಾಗಿವೆ. ಅನುಮೋದನೆ ವಿಳಂಬವಾಗುತ್ತಿದ್ದು, ಈ ಕುರಿತು ಚರ್ಚೆ ನಡೆಸಲು ಮಾಂಡವಿಯಾ ಸೌಮ್ಯಾ ಸ್ವಾಮಿನಾಥನ್ ಅವರನ್ನು ಭೇಟಿ ಮಾಡಿದ್ದಾರೆ.
ಭಾರತದಲ್ಲಿ ಕೊರೊನಾವೈರಸ್ ಹರಡುವಿಕೆ ನಿಯಂತ್ರಿಸುವ ಉದ್ದೇಶದಿಂದ ಲಸಿಕೆ ವಿತರಣೆ ವೇಗವನ್ನು ಹೆಚ್ಚಿಸಿ ಕೇಂದ್ರ ಸರ್ಕಾರದಿಂದ ಲಸಿಕೆಯ ಸರಬರಾಜು ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ. 2021ರ ಆಗಸ್ಟ್ 12ರ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ 54,04,78,610 ಡೋಸ್ ಕೊರೊನಾ ಲಸಿಕೆ ಪೂರೈಕೆ ಮಾಡಲಾಗಿದೆ.
ಭಾರತದಲ್ಲಿ ಕೊರೊನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಲಸಿಕೆ ವಿತರಣೆಯನ್ನು ಚುರುಕುಗೊಳಿಸಲಾಗಿದೆ. ಕಳೆದ ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಏಪ್ರಿಲ್ 1ರಂದು ಮೂರನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಆರಂಭಿಸಲಾಗಿದೆ.