ಒಲಂಪಿಕ್ಸ್ ನಲ್ಲಿ ಕಂಚು ಪದಕ ಗೆದ್ದ ಪಿವಿ ಸಿಂಧು

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಕಂಚಿನ ಪದಕ ಗೆದ್ದಿದ್ದಾರೆ. ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಚೀನಾದ ಹೀ ಬಿಂಗ್ಜಿಯಾವೋ ಅವರನ್ನು 21-13, 21-15 ನೇರ ಸೆಟ್​ಗಳಿಂದ ಮಣಿಸುವ ಮೂಲಕ ಪದಕಕ್ಕೆ ಕೊರೊಳೊಡ್ಡಿದ್ದರು.

ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಬಿಂಗ್ಜಿಯಾವೊ ವಿರುದ್ದ ಮೊದಲ ಸುತ್ತಿನ ಆರಂಭದಲ್ಲೇ ಸಿಂಧು ಮೇಲುಗೈ ಸಾಧಿಸಿದ್ದರು . ಸಿಂಧು ಅವರ ಭರ್ಜರಿ ಟೈಮಿಂಗ್ ಹಾಗೂ ನಿಖರತೆ ಮುಂದೆ ಮೊದಲ ಸುತ್ತಿನಲ್ಲಿ ಚೀನಾ ಆಟಗಾರ್ತಿ  21-13 ರಿಂದ ಸೋಲೊಪ್ಪಿಕೊಂಡರು. ಇನ್ನು ಮೊದಲ ಸುತ್ತನ್ನು ಗೆದ್ದ ಆತ್ಮ ವಿಶ್ವಾಸದಲ್ಲಿ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಸಿಂಧು 2ನೇ ಸುತ್ತಿನಲ್ಲೂ ಭರ್ಜರಿ ಪ್ರದರ್ಶನ ನೀಡಿದರು. ಕ್ರಾಸ್ ಕೋರ್ಟ್ ಆಟದ ಮೂಲಕ ಗಮನ ಸೆಳೆದ ಸಿಂಧು ಒಂದು ಹಂತದಲ್ಲಿ ಹೀ ಬಿಂಗ್ಜಿಯಾವೊ ವಿರುದ್ದ ಮೇಲುಗೈ ಸಾಧಿಸಿದ್ದರು. ಆದರೆ ಕಂಬ್ಯಾಕ್ ಮಾಡುವಲ್ಲಿ ಯಶಸ್ವಿಯಾದ  ಹೀ ಬಿಂಗ್ಜಿಯಾವೊ ಭರ್ಜರಿ ಪೈಪೋಟಿ ನೀಡಿದರು. ಇದಾಗ್ಯೂ ಅಂತಿಮವಾಗಿ 12-15 ಅಂತರದಿಂದ ಸೋಲುಣಿಸಿದ ಸಿಂಧು ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟರು. ಇದರೊಂದಿಗೆ ಒಲಿಂಪಿಕ್ಸ್​ನಲ್ಲಿ ಬಾಡ್ಮಿಂಟನ್​ನಲ್ಲಿ ಭಾರತಕ್ಕಾಗಿ 2 ಪದಕ ಗೆದ್ದುಕೊಟ್ಟ ದಾಖಲೆಯನ್ನು ಸಿಂಧು ಬರೆದರು.

ಈ ಮೂಲಕ ಸಿಂಧು ಒಲಿಂಪಿಕ್ಸ್​ನಲ್ಲಿ 2ನೇ ಬಾರಿ ಪದಕ ಗೆದ್ದ ಸಾಧನೆ ಮಾಡಿದರು. ಈ ಹಿಂದೆ 2016ರಲ್ಲಿ ರಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದರು. ಇದೀಗ ಕಂಚಿನ ಪದಕದೊಂದಿಗೆ ಮತ್ತೊಮ್ಮೆ ಇತಿಹಾಸ ನಿರ್ಮಿಸಿದ್ದಾರೆ.

ಒಲಿಂಪಿಕ್ಸ್ ಆರಂಭಕ್ಕೂ ಮುನ್ನವೇ ಸಿಂಧು ಅವರಿಂದ ಪದಕ ನಿರೀಕ್ಷಿಸಲಾಗಿತ್ತು. ಅದರಂತೆ ಸೆಮಿ ಫೈನಲ್ ಪ್ರವೇಶಿಸಿದ್ದ ಅವರು ತೈ ಜು ಯಿಂಗ್​ ವಿರುದ್ಧ 18-21, 12-21 ಸೆಟ್​ಗಳಿಂದ ಪರಾಜಯಗೊಂಡಿದ್ದರಿಂದ ಚಿನ್ನದ ಕನಸು ಭಗ್ನಗೊಂಡಿತು. ಇದೀಗ ಮೂರನೇ ಸ್ಥಾನ ಪಡೆಯುವ ಮೂಲಕ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಸದ್ಯ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಒಂದು ಬೆಳ್ಳಿ (ಮೀರಾಬಾಯಿ ಚಾನು) ಹಾಗೂ ಒಂದು ಕಂಚಿನ ಪದಕ ಪಡೆಯುವ ಮೂಲಕ ಪದಕ ಪಟ್ಟಿಯಲ್ಲಿ ಭಾರತ 62ನೇ ಸ್ಥಾನದಲ್ಲಿದೆ.

Leave a Reply

Your email address will not be published. Required fields are marked *

error: Content is protected !!