ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಯಾದ ಆತ್ಮನಿರ್ಭರ ಭಾರತ ಯೋಜನೆಗೆ ಪೂರಕವಾಗಿ ಕಾರ್ಯನಿರ್ವಹಿಸುವುದಾಗಿ ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಕು.ಶೋಭಾ ಕರಂದ್ಲಾಜೆ ಹೇಳಿದರು.
ಅವರು ನಗರದ ಸಿದ್ಧಗಂಗಾ ಮಠಕ್ಕೆ ನೂತನ ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಭೇಟಿ ನೀಡಿ ಡಾ.ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಶ್ರೀ ಸಿದ್ಧಲಿಂಗ ಮಹಾ ಸ್ವಾಮಿಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ತಾವು ಬಹಳ ದಿನಗಳ ನಂತರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದು, ಪೂಜ್ಯರ ಆಶೀರ್ವಾದಕ್ಕಾಗಿ ಆಗಮಿಸಿದ್ದೇನೆ. ಶ್ರೀಗಳು ಜೀವಂತವಾಗಿದ್ದ ಸಂದರ್ಭದಲ್ಲಿ ಶ್ರೀ ಮಠಕ್ಕೆ ಬಂದಾಗಲೆಲ್ಲಾ ಅವರು ಕೃಷಿ ಅಭಿವೃದ್ದಿ, ರೈತರ ಕಲ್ಯಾಣ ಹಾಗೂ ನೀರಾವರಿಯ ಬಗ್ಗೆ ತಮ್ಮೊಂದಿಗೆ ಚರ್ಚೆ ನಡೆಸಿ ಸಲಹೆ ನೀಡುತ್ತಿದ್ದರು. ಅಂತೆಯೇ ಪ್ರಸ್ತುತ ತಾವು ಕೃಷಿ ಸಚಿವರಾಗಿದ್ದು ಪೂಜ್ಯರ ಆಶೀರ್ವಾದವನ್ನು ಪಡೆದು ತಮ್ಮ ಕಾರ್ಯ ಪ್ರಾರಂಭಿಸುವುದಾಗಿ ತಿಳಿಸಿದರು
ಇದೇ ವೇಳೆ ಒಂದು ಜಿಲ್ಲೆ ಒಂದು ಬೆಳೆ ಯೋಜನೆಯ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಕೊರೋನಾ ಕಾರಣದಿಂದ ಆ ಯೋಜನೆಯ ಅನುಷ್ಠಾನದಲ್ಲಿ ಕೊಂಚ ವಿಳಂಬವಾಗಿದ್ದು, ಈಗಾಗಲೇ ಮಾನ್ಯ ಪ್ರಧಾನಮಂತ್ರಿಗಳು ಅದರ ಬಗ್ಗೆ ಕಾರ್ಯಪ್ರೌವೃತ್ತರಾಗಲು ಸೂಚನೆ ನೀಡಿದ್ದು, ಅದರಂತೆಯೇ ಪ್ರತಿಯೊಬ್ಬ ರೈತನಿಗೂ ಅನುಕೂಲವಾಗುವಂತೆ ಅವರ ಅದಾಯ ಇಮ್ಮಡಿಗೊಳಿಸುವ ಯೋಜನೆ ರೂಪಿಸುವುದಾಗಿ ತಿಳಿಸಿದರು.
ತಾವು ರಾಜ್ಯದ ರೈತರ ಸಮಸ್ಯೆಗಳು ಹಾಗೂ ಕೃಷಿ ಯೋಜನೆಗಳ ಅನುಷ್ಠಾನದ ಬಗ್ಗೆ ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ರವರೊಂದಿಗೆ ಚರ್ಚಿಸಿದ್ದು, ರಾಜ್ಯದಲ್ಲಿ ರೈತರಿಗೆ ಆಗಬೇಕಿರುವ ಅನುಕೂಲಗಳು ಹಾಗೂ ಒಂದು ಜಿಲ್ಲೆ ಒಂದು ಬೆಳೆಯ ಬಗ್ಗೆ ಸಭೆ ನಡೆಸುವುದಾಗಿ ತಿಳಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ನಗರ ಶಾಸಕ ಜ್ಯೋತಿಗಣೇಶ್, ಮಾಜಿ ಶಾಸಕ ಬಿ.ಸುರೇಶ್ ಗೌಡ, ಮಾಜಿ ವಿ.ಪ. ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್, ಜಿಲ್ಲಾ ಭಾಜಪ ಯುವ ಮೋರ್ಚಾ ಅಧ್ಯಕ್ಷ ಅರಕೆರೆ ರವೀಶ್, ರೇಷ್ಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಆರ್.ಗೌಡ, ಮುಖಂಡರಾದ ಶಿವಪ್ರಸಾದ್, ಎಂ.ಬಿ.ನಂದೀಶ್, ರವಿಶಂಕರ್ ಹೆಬ್ಬಾಕ ಶ್ರೀಮತಿ ಪ್ರೇಮಾ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.