ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ತುಮಕೂರು ವತಿಯಿಂದ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿ 22ನೇ ಕಾರ್ಗಿಲ್ ವಿಜಯದ ನೆನೆಪಿಗಾಗಿ ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಿವೃತ್ತ ಯೋಧರಾದ ನಂಜುಂಡಯ್ಯ ಕಾರ್ಗಿಲ್ ಯುದ್ಧಭೂಮಿಯಲ್ಲಿ ಭಾರತ ಪಾಕಿಸ್ತಾನವನ್ನು ಬಗ್ಗುಬಡಿದು ದಿಗ್ವಿಜಯ ಸಾದಿಸಿ 22 ವರ್ಷವಾಯಿತು. ಮನೆ, ಕುಟುಂಬ ಸದಸ್ಯರಿಂದ ದೂರವಾಗಿದ್ದುಕೊಂಡು ದೇಶ ರಕ್ಷಣೆಗೆ ಲಕ್ಷಾಂತರ ಯೋಧರು ಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸೇವೆ ಮತ್ತು ತ್ಯಾಗವನ್ನು ಯುವಪೀಳಿಗೆ ನೆನೆಯುವಂತಾಗಬೇಕು. ಈಗಿನ ಯುವಕರು ಸೇನೆ ಸೇರುವುದಕ್ಕೆ ಮುಂದೆ ಬರಬೇಕು ಹಾಗೆಯೇ ತಂದೆ, ತಾಯಂದಿರು ತಮ್ಮ ಮಕ್ಕಳನ್ನು ದೇಶ ಸೇವೆಗಾಗಿ ಕಳಿಸಬೇಕು. ಭಾರತೀಯ ಸೇನೆಯಲ್ಲಿ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಪುಣ್ಯ. ತಮ್ಮ ಪ್ರಾಣವನ್ನು ಮುಡುಪಾಗಿಟ್ಟು ದೇಶ ಕಾಯುವ ಯೋಧರಿಗೆ ನಮ್ಮ ಜನರು ಋಣಿಯಾಗಿರಬೇಕು ಎಂದರು.


ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಲೀಲಾವತಿಯವರು ಮಾತನಾಡಿ ಕಾರ್ಗಿಲ್ ಯುದ್ಧದಲ್ಲಿ ಸೈನಿಕರ ದೇಶ ಪ್ರೇಮದಿಂದಾಗಿ ಭಾರತ ಯುದ್ಧದಲ್ಲಿ ಜಯಗಳಿಸಿತು. ಆದರೆ, ಈ ಯುದ್ಧದಲ್ಲಿ ೫೨೦ಕ್ಕೂ ಹೆಚ್ಚು ಸೈನಿಕರ ಬಲಿದಾನವಾಯಿತು ಮತ್ತು ೧೩೦೦ ಕ್ಕೂ ಹೆಚ್ಚು ಸೈನಿಕರು ಅಪಾಂಗರಾದರು. ದೇಶಕ್ಕಾಗಿ ಸರ್ವಸ್ವವನ್ನು ಅರ್ಪಿಸಿದ ಅವರ ಆದರ್ಶಗಳು ನಮ್ಮ ಬದುಕಿನ ಬೆಳಕಾಗಬೇಕು, ಅವರ ಜೀವನ ನಮಗೆ ಪ್ರೇರಣೆಯಾಗಬೇಕು. ಇಂದು ನಾವು ೨೨ನೇ ಕಾಗಿಲ್ ವಿಜಯ ದಿನವನ್ನು ಸೈನಿಕರ ಬದುಕಿನ ಆದರ್ಶದ ಅಡಿಗಲ್ಲಿನ ಮೇಲೆ ಭಾರತದ ಭವಿಷ್ಯ ನಿರ್ಮಿಸುವ ಪ್ರತಿಜ್ಞೆಗೈಯುವುದಕ್ಕೆ ಶುಭದಿನ. ನಮ್ಮ ಸುಂದರ ನಾಳೆಗಳಿಗಾಗಿ ತಮ್ಮ ಪ್ರಾಣವನ್ನು ದೇಶಕ್ಕಾಗಿ ಸಮರ್ಪಿಸಿದ ಎಲ್ಲಾ ಸೈನಿಕರನ್ನು ನೆನೆಯೋಣ. ಅವರೆಲ್ಲರ ಸುಂದರ ಬದುಕಿಗಾಗಿ ಪ್ರಾರ್ಥನೆ ಮಾಡೋಣ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ಮುದ್ಧಲಿಂಗೇಶ, ನಾಗರಾಜಯ್ಯ ಮತ್ತು ನಂಜುಂಡಯ್ಯನವರನ್ನ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ, ನಗರ ಸಂಘಟನಾ ಕಾರ್ಯದರ್ಶಿ ಶಿವಕುಮಾರ, ನಗರ ಕಾರ್ಯದರ್ಶಿ ಪ್ರತಾಪಸಿಂಹ, ವಿದ್ಯಾರ್ಥಿನಿ ಪ್ರಮುಖ್ ಅರ್ಪಿತಾ ಪೃಥ್ವೀರಾಜ್, ಚೈತ್ರಾ, ಸುಷ್ಮಾ, ಉಪನ್ಯಾಸಕರಾದ ಸುಬ್ಬಯ್ಯ, ಶರ್ಮಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!