ತುಮಕೂರು: ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿರುವುದಾಗಿ ಮಹಾನಗರ ಪಾಲಿಕೆ ಹೈಕೋರ್ಟ್ ಗೆ ಚಿತ್ರಸಹಿತ ವರದಿ ನೀಡಿದೆ. ಇದು ಕೇವಲ ಕಣ್ಣೊರೆಸುವ ತಂತ್ರವಾಗಿದ್ದು, ನಗರದಾದ್ಯಂತ ಸಾಕಷ್ಟು ಗುಂಡಿಗಳಿವೆ. ನಾನು ಆಧಾರಸಹಿತವಾಗಿ ಹೈಕೋರ್ಟ್ ಗೆ ಆಕ್ಷೇಪಣೆ ಸಲ್ಲಿಸುತ್ತಿದ್ದೇನೆ ಎಂದು ವಕೀಲ ರಮೇಶ್ ನಾಯ್ಕ್ ತಿಳಿಸಿದರು.
ಹೈಕೋರ್ಟ್ ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ನೀಡಿದ್ದು, ಸಾಕ್ಷಿ ಸಮೇತ ಹೋರಾಟ ಮುಂದುವರೆಸುತ್ತೇನೆ.
2021 ನವೆಂಬರ್ ನಲ್ಲಿ ರಸ್ತೆ ಗುಂಡಿ ಮುಚ್ಚುವ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೆ. ಹೈಕೋರ್ಟ್ ನಗರಾಭಿವೃದ್ಧಿ ಇಲಾಖೆ ಮುಖ್ಯ ಕಾರ್ಯದರ್ಶಿ ಹಾಗೂ ಪಾಲಿಕೆಗೆ ನೋಟಿಸ್ ನೀಡಿ ರಸ್ತೆ ಗುಂಡಿ ಮುಚ್ಚಲು ಕ್ರಮಕೈಗೊಂಡು ವರದಿ ನೀಡುವಂತೆ ಎರಡು ತಿಂಗಳ ಕಾಲಾವಕಾಶ ನೀಡಿತ್ತು. ಮಹಾನಗರ ಪಾಲಿಕೆ ರಸ್ತೆ ಗುಂಡಿ ಮುಚ್ಚಿದ್ದು, ಇನ್ನೂ ಎಲ್ಲಾದರು ಗುಂಡಿಗಳಿದ್ದರೆ 0816-2272200 ಅಥವಾ 9449872599 ಸಂಪರ್ಕಿಸುವಂತೆ ಹೇಳಿದೆ.
ರಸ್ತೆ ಗುಂಡಿಗಳಿರುವುದನ್ನು ಗಮನಕ್ಕೆ ತಂದರೆ ಕೂಡಲೇ ಕ್ರಮಕೈಗೊಳ್ಳುವ ಪಾಲಿಕೆ ಭರವಸೆ ಶ್ಲಾಘನೀಯ. ಆದರೆ, ಹೈಕೋರ್ಟ್ ಗೆ ವರದಿ ಸಲ್ಲಿಸುವ ಮುನ್ನ ಸಮಗ್ರವಾಗಿ ರಸ್ತೆ ಗುಡಿಗಳ ಕುರಿತು ಮಾಹಿತಿ ಕಲೆಹಾಕಿ ಸತ್ಯಾಂಶದ ವರದಿ ಸಲ್ಲಿಸಬೇಕಲ್ಲವೇ? ನಗರದ ಬಹುತೇಕ ಕಡೆಗಳಲ್ಲಿ ರಸ್ತೆಗುಂಡಿಗಳಿವೆ. ಹೀಗಾಗಿ ನಾನು ಅವುಗಳ ಆಧಾರದಲ್ಲಿ ಹೈಕೋರ್ಟ್ ಗೆ ಆಕ್ಷೇಪಣೆ ಸಲ್ಲಿಸುತ್ತಿದ್ದೇನೆ. ಸಾರ್ವಜನಿಕರು ಸಹ ಪಾಲಿಕೆ ನೀಡಿರುವ ದೂ.ಸಂ ಸಂಪರ್ಕಿಸಿ ಗುಂಡಿ ಮುಕ್ತ ತುಮಕೂರು ನಗರ ನಿರ್ಮಾಣಕ್ಕೆ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.
ಪಾಲಿಕೆ ಕಂಟ್ರೋಲ್ ರೂಮ್ಗೆ ದೂರುಗಳ ಕರೆ.
ಇದಕ್ಕೆ ಸಂಬಂಧಿಸಿದಂತೆ ಪಾಲಿಕೆ ಹೈಕೋರ್ಟ್ ಗೆ ಸುಳ್ಳು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಕಂಟ್ರೋಲ್ ರೂಂ ಗೆ ಕರೆ ಮಾಡಿ ಸಾರ್ವಜನಿಕರು ರಸ್ತೆ ಗುಂಡಿ ಸರಿಪಡಿಸುವ ಬಗ್ಗೆ ಹಲವು ದೂರುಗಳು ಸಲ್ಲಿಸುತ್ತಿರುವುದು ಕಂಡುಬಂದಿದೆ.
ನಗರದ ಹಲವು ಬಡಾವಣೆಗಳ ರಸ್ತೆ ಸಂಪೂರ್ಣ ದುಸ್ಥಿತಿಗೆ ತಲುಪಿವೆ.
ಇನ್ನು ತುಮಕೂರು ನಗರದ ಕುಣಿಗಲ್ ಮುಖ್ಯ ರಸ್ತೆ , ಮೇಲೆಕೋಟೆ ಮುಖ್ಯರಸ್ತೆ , ಅಮರ ಜ್ಯೋತಿ ನಗರ ಮುಖ್ಯ ರಸ್ತೆ, ಸದಾಶಿವನಗರದ ಹಲವು ರಸ್ತೆಗಳು ಸೇರಿದಂತೆ ಹಲವು ಬಡಾವಣೆಗಳ ರಸ್ತೆಗಳು ಸಂಪೂರ್ಣ ಹಾಳಾಗಿವೆ.
ಇನ್ನು ಪಾಲಿಕೆ ಅಧಿಕಾರಿಗಳು ಹೈಕೋರ್ಟ್ಗೆ ಸುಳ್ಳು ವರದಿಯನ್ನು ಸಲ್ಲಿಸಿರುವ ಹಿನ್ನೆಲೆಯಲ್ಲಿ ತುಮಕೂರು ನಗರದ ಸಾರ್ವಜನಿಕ ವಲಯದಲ್ಲೂ ಸಹ ಸಾಕಷ್ಟು ಆಕ್ರೋಶ ವ್ಯತ್ಯವಾಗಿದ್ದು ಪಾಲಿಕೆ ಅಧಿಕಾರಿಗಳ ನಡೆಗೆ ಸಾರ್ವಜನಿಕರು ಸಹ ಆಕ್ರೋಶ ಹೊರಹಾಕುತ್ತಿದ್ದಾರೆ.