ತುಮಕೂರು ನಗರದ ಟಿ.ಪಿ.ಕೈಲಾಸಂ ರಸ್ತೆಯ ಬಳಿ (ಸಪ್ತಗಿರಿ ಕಾಲೇಜು ಹತ್ತಿರ) ಇರುವ ಗಾರೆ ನರಸಯ್ಯನ ಕಟ್ಟೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಅಭಿವೃದ್ಧಿಪಡಿಸಿದ್ದು, ಅದನ್ನು ತುಮಕೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಸಮಾರಂಭ ದಲ್ಲಿ ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರ ಸುಪುತ್ರಿ, ತುಮಕೂರು ಮಹಾನಗರ ಪಾಲಿಕೆಯ ಮಹಾಪೌರರಾದ ಬಿ.ಜಿ.ಕೃಷ್ಣಪ್ಪ, ಪಾಲಿಕೆ ಸದಸ್ಯ ವಿಷ್ಣುವರ್ಧನ್ ಮೊದಲಾದ ಗಣ್ಯರು ವೇದಿಕೆಯಲ್ಲಿದ್ದರು ಎಂದು ತಿಳಿದು ಬಂದಿದೆ.
ಸ್ವಸಹಾಯ ಸಂಘಗಳ ನೂರಾರು ಮಹಿಳೆಯರೂ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು ಎನ್ನಲಾಗಿದೆ. ಈ ಭಾಗದ ಅಂದರೆ 30 ನೇ ವಾರ್ಡ್ ಕಾರ್ಪೊರೇಟರ್ ಶ್ರೀ ವಿಷ್ಣುವರ್ಧನ್ ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಜೋರಾಗಿ ಬಿರುಗಾಳಿ ಎದ್ದಿತು. ಗಾಳಿಯ ರಭಸಕ್ಕೆ ಈ ಕಟ್ಟೆಯ ಒಳಭಾಗದಲ್ಲಿ ಹಾಕಿದ್ದ ಷಾಮಿಯಾನ ಬುಡಸಮೇತವಾಗಿ ಕಿತ್ತು ಹೋಗಿ ವೇದಿಕೆ ಹಾಗೂ ಜನರ ಮೇಲೆ ಶಾಮಿಯಾನ ಉರುಳಿಬಿದ್ದ ಪರಿಣಾಮ ಕಬ್ಬಿಣದ ಕಂಬಿ ಬಿದ್ದು ಶ್ರೀ ವಿಷ್ಣುವರ್ಧನ್ ರವರು ಹಾಗೂ ಇನ್ನಿತರರು ಗಾಯಗೊಂಡರು.
ಅಲ್ಲಿದ್ದ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಗಾಯಗೊಂಡವರನ್ನು ಕರೆದೊಯ್ದರು ಎನ್ನಲಾಗಿದೆ, ಇತರೆ ಹಲವರಿಗೆ ಸಣ್ಣಪುಟ್ಟ ಗಾಯಗಳಾದವು. ವೇದಿಕೆ ಪಕ್ಕ ನಿಲುಗಡೆಗೊಂಡಿದ್ದ ಕೆಲವು ಕಾರುಗಳ ಮೇಲೆ ಶಾಮಿಯಾನದ ಕಬ್ಬಿಣದ ಕಂಬಿಗಳು ಬಿದ್ದು ಕಾರುಗಳು ಜಖಂಗೊಂಡವು. ಅದೃಷ್ಟವಶಾತ್ ವೇದಿಕೆಯಲ್ಲಿದ್ದ ಗಣ್ಯರುಗಳಿಗೆ ಯಾವುದೇ ಅಪಾಯವಿಲ್ಲದೆ ಪಾರಾದರು. ಗಾಬರಿಯಿಂದ ಜನರು ದಿಕ್ಕಾಪಾಲಾಗಿ ಚದುರಿದರು.
ಈ ಸಮಾರಂಭಕ್ಕೆಂದು ಆಗ ತಾನೇ ಹೊರಗಡೆ ನನ್ನ ಬೈಕ್ ನಿಲ್ಲಿಸಿ ನಡೆದುಕೊಂಡು ಹೋಗುವಾಗ ಇದ್ದಕ್ಕಿದ್ದಂತೆ ನನ್ನ ಕಣ್ಮುಂದೆಯೇ ಕಣ್ಣುಮುಚ್ಚಿ ತೆಗೆಯುವಷ್ಟರಲ್ಲಿ ಈ ಅನಿರೀಕ್ಷಿತ ಘಟನೆ ನಡೆದುಹೋಯಿತು. ನಾನೂ ಕೆಲ ಕ್ಷಣ ದಿಗ್ಮೂಢನಾದೆ ಎಂದು ಸ್ಥಳದಲ್ಲಿದ್ದ ಆರ್.ವಿಶ್ವನಾಥನ್ ಎಂದು ತಿಳಿಸಿದ್ದಾರೆ.